
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಲ್ಯಾಣ ನಿಧಿಗೆ ರಾಜ್ಯ ಸರ್ಕಾರದ 25 ಲಕ್ಷ ರೂ. ಬಿಡುಗಡೆ
ತವರೂರಿನ ಪತ್ರಕರ್ತರ ಕಲ್ಯಾಣಕ್ಕೆ ಹೆಗಲು ನೀಡಿದ ಕೆ.ವಿ ಪ್ರಭಾಕರ್
ಕೋಲಾರ,ಅ.07: ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ತನ್ನ ಸದಸ್ಯರ ಕ್ಷೇಮಾಭಿವೃದ್ಧಿಗಾಗಿ ಸ್ಥಾಪಿಸಿರುವ ಪತ್ರಕರ್ತರ ಕಲ್ಯಾಣ ನಿಧಿಗೆ ಕರ್ನಾಟಕ ಸರ್ಕಾರವು 25 ಲಕ್ಷ ರೂ ಅನುದಾನ ಬಿಡುಗಡೆ ಮಾಡಿ ನವಂಬರ್ 7 ರಂದು ಅಧಿಕೃತ ಆದೇಶ ಹೊರಡಿಸಿದೆ.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 2022 ರಲ್ಲಿ ಬಿ.ವಿ.ಗೋಪಿನಾಥ್ ಅಧ್ಯಕ್ಷರಾದ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಪತ್ರಕರ್ತರ ಆಪತ್ಕಾಲಕ್ಕೆ ನೆರವಾಗುವ ಸಲುವಾಗಿ 1 ಕೋಟಿ ರೂಗಳ ಕ್ಷೇಮಾಭಿವೃದ್ಧಿ ನಿಧಿಯನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಪ್ರಕಟಿಸಿದ್ದರು.
ಇದುವರೆಗೂ ಸಂಘವು ಉದ್ಯಮಿ ಅಬ್ದುಲ್ ಸುಭಾನ್, ಕೆಲವು ಸದಸ್ಯರ ವೈಯಕ್ತಿಕ ನೆರವು ಮತ್ತು ಸ್ವಂತ ಸಂಪನ್ಮೂಲದಿಂದ ಒಟ್ಟು 3,31,055 ಲಕ್ಷ ರೂಗಳನ್ನು ಸಂಗ್ರಹಿಸಿ ಕಲ್ಯಾಣ ನಿಧಿಯ ಹೆಸರಿನಲ್ಲಿ ಬ್ಯಾಂಕಿನಲ್ಲಿ ಠೇವಣಿ ಇರಿಸಿದೆ.
ಈ ನಡುವೆ 2023ರ ಜುಲೈ 1 ರಂದು ನಡೆದ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಹಾಗೂ ಕೋಲಾರದ ಹೆಮ್ಮೆಯ ಹುಡುಗ ಕೆ.ವಿ. ಪ್ರಭಾಕರ್ ಅವರಿಗೆ ಪತ್ರಕರ್ತರ ಕಲ್ಯಾಣನಿಧಿಗಾಗಿ ಸರ್ಕಾರದಿಂದ 50 ಲಕ್ಷ ರೂ ಮಂಜೂರು ಮಾಡಿಸುವಂತೆ ಮನವಿ ಸಲ್ಲಿಸಿತು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೆ.ವಿ.ಪ್ರಭಾಕರ್ ಮುಖ್ಯಮಂತ್ರಿ ಸಿದ್ಧರಾಮಯ್ಯರಿಂದ 25 ಲಕ್ಷ ಅನುದಾನ ಮಂಜೂರು ಮಾಡಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಆರ್ಥಿಕ ಇಲಾಖೆಯ ಎಲ್ಲಾ ಪ್ರಕ್ರಿಯೆಗಳಲ್ಲಿ ಖುದ್ದು ಆಸಕ್ತಿ ವಹಿಸಿದ್ದ ಕೆ.ವಿ.ಪ್ರಭಾಕರ್ ನವಂಬರ್ 7 ರಂದು ರಾಜ್ಯ ಸರ್ಕಾರದಿಂದ 25 ಲಕ್ಷ ರೂ ಅನುದಾನ ಬಿಡುಗಡೆ ಮಾಡಿರುವ ಆದೇಶ ಪತ್ರವನ್ನು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ದೊರಕಿಸಿಕೊಟ್ಟಿದ್ದಾರೆ.
ತವರೂರಿನ ಪತ್ರಕರ್ತರ ಕಲ್ಯಾಣಕ್ಕಾಗಿ ಹೆಗಲು ನೀಡಿರುವ ಕೆವಿ ಪ್ರಭಾಕರ್ ಅವರಿಗೆ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್‌ಕುಮಾರ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಎಸ್.ಗಣೇಶ್, ವಿ.ಮುನಿರಾಜು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.