
ಮುಳಬಾಗಿಲು: ದುಗ್ಗಸಂದ್ರ ಹೋಬಳಿ ಅಗರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಪಿಳ್ಳಪ್ಪ , ಉಪಾಧ್ಯಕ್ಷರಾಗಿ ಜಿ.ಎಂ .ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಪಿಳ್ಳಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಎಂ. ವೆಂಕಟೇಶ್ ಇಬ್ಬರೇ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾದರು. ಅವರನ್ನು ಜಿ.ಪಂ ಮಾಜಿ ಸದಸ್ಯ ಬಿ.ವಿ.ಸಾಮೇಗೌಡ ಹಾಗೂ ಆಡಳಿತ ಮಂಡಳಿ ನಿರ್ದೇಶಕರು, ಗ್ರಾಮಸ್ಥರು ಅಭಿನಂದಿಸಿದರು. ಚುನಾವಣಾಧಿಕಾರಿಯಾಗಿ ಶಿವಶಂಕರ್ ಕಾರ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷ ಪಿಳ್ಳಪ್ಪ ಮಾತನಾಡಿ, ಸ್ಥಳೀಯ ರೈತರ ಜೀವನ ಮಟ್ಟ ಮತ್ತು ಅವರ ಆರ್ಥಿಕ ಸುಧಾರಣೆಗೆ ಹೈನುಗಾರಿಕೆ ಸಂಜೀವಿನಿಯಾಗಿದೆ. ರೈತರು ಉತ್ತಮ ತಳಿಯ ಹಸುಗಳನ್ನು ಸಾಕುವುದರ ಜೊತೆಗೆ ಹೈನುಗಾರಿಕೆಯಲ್ಲಿ ಆಧುನಿಕ ತಾಂತ್ರಿಕತೆ ಅಳವಡಿಸಿಕೊಂಡು ಹೆಚ್ಚಿನ ಲಾಭ ಪಡೆಯಬಹುದು ಎಂದು ಸಲಹೆ ನೀಡಿದರು.
ಸಂಘದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಎಲ್ಲಾ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಡೈರಿಯನ್ನು ತಾಲೂಕಿನಲ್ಲಿ ಉನ್ನತ ಮಟ್ಟದ ಕೊಂಡೊಯ್ಯುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದು ಹೇಳಿದರು.