
ಮುಳಬಾಗಿಲು: ಸಾರ್ವಜನಿಕರ ಕೆಲಸಗಳಿಗೆ ಸ್ಪಂದಿಸದೆ ಬೇಜವಾಬ್ದಾರಿ ಹಾಗೂ ಉದಾಸೀನತೆ ತೋರಿಸುತ್ತಾ ಜನಸಾಮಾನ್ಯರಿಗೆ ತೊಂದರೆ ಕೊಡುತ್ತಿರುವ ನರೇಗಾ ಇಂಜಿನಿಯರ್ ಸ್ನೇಹಾ ಅವರನ್ನು ವರ್ಗಾವಣೆ ಮಾಡಲು ದೇವರಾಯಸಮುದ್ರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಮ್ಮನಹಳ್ಳಿ ಕೃಷ್ಣ ತಾ.ಪಂ ಇಓ ಡಾ ಕೆ.ಸರ್ವೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ದೇವರಾಯಸಮುದ್ರ ಗ್ರಾಮಪಂಚಾಯತಿ ನರೇಗಾ ಇಂಜಿನಿಯರ್ ಸ್ನೇಹಾ ಅವರು ಪಂಚಾಯಿತಿಯಲ್ಲಿರುವ ಫಲಾನುಭವಿಗಳು ಕುರಿ ಮತ್ತು ದನದ ಷೆಡ್ಡುಗಳು ನಿರ್ಮಾಣ ಮಾಡಲು ಅಗತ್ಯ ದಾಖಲೆಗಳನ್ನು ನೀಡಿ ವರ್ಕ್ ಕೋಡ್ ಮಾಡಿ ಅವರಿಗೆ ಲಾಗಿನ್‌ಗೆ ಕಳುಹಿಸದೆ ಸುಮಾರು ತಿಂಗಳುಗಳು ಕಳೆದರೂ ಸಹ ಕ್ರಿಯಾಯೋಜನೆಗೆ -ಎಸ್ಟಿಮೇಟ್ ಮಾಡದೆ ಜನರ ಕೆಲಸಗಳಿಗೆ ಸ್ಪಂದಿಸದೆ ಬೇಜವಾಬ್ದಾರಿ ಮಾಡುತ್ತಾ ಜನರನ್ನು ಹಿಂಸಿಸುತ್ತಿದ್ದಾರೆ. ಈ ಕುರಿತು ಸಾರ್ವಜನಿಕರು ಅನೇಕ ಬಾರಿ ಗ್ರಾಮಪಂಚಾಯಿತಿಗೆ ಬಂದು ಅಧ್ಯಕ್ಷ ಉಪಾಧ್ಯಕ್ಷರಿಗೆ ದೂರು ಸಹ ನೀಡಿದ್ದಾರೆ. ಆದ್ದರಿಂದ ಸರ್ಕಾರದ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿದೆ. ಇವರು ಹಣ ನೀಡಿದರೆ ಮಾತ್ರ ಕ್ರಿಯಾಯೋಜನೆ ಸಿದ್ಧಪಡಿಸುತ್ತಾರೆ ಎಂಬ ದೂರುಗಳೂ ಸಹ ಇವರ ಮೇಲೆ ಇದೆ. ಹೀಗಾಗಿ ಅವರು ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರಿಸುತ್ತಾ ಸರಿಯಾದ ಸಮಯಕ್ಕೆ ಪಂಚಾಯಿತಿಗೆ ಹಾಜರಾಗದೆ ಕರ್ತವ್ಯಲೋಪ ಎಸಗುತ್ತಿದ್ದಾರೆ. ಸರಿಯಾಗಿ ಕರ್ತವ್ಯ ಮಾಡದೆ ನಿರ್ಲಕ್ಷ್ಯ ಮಾಡುತ್ತಿರುವ ಇಂಜಿನಿಯರ್ ಸ್ನೇಹಾ ಅವರನ್ನು ಕೂಡಲೇ ಬೇರೆ ಪಂಚಾಯಿತಿಗೆ ವರ್ಗಾವಣೆ ಮಾಡಿ ದಕ್ಷ ಪ್ರಾಮಾಣಿಕ ಅಧಿಕಾರಿಯನ್ನು ದೇವರಾಯಸಮುದ್ರ ಗ್ರಾಮಪಂಚಾಯಿತಿಗೆ ಬೇರೆಯವರನ್ನು ನಿಯೋಜನೆ ಮಾಡಬೇಕೆಂದು ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.