
ಮುಳಬಾಗಿಲು: ಭಾರತ ದೇಶ ಅಪಘಾತದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದು, ಮರಣದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುವುದು ನಮ್ಮ ದುರಂತದ ಸಂಗತಿಯಾಗಿದೆ ಎಂದು ಗ್ರಾ.ಪಂ ಅಧ್ಯಕ್ಷ ಕೆ ಎಸ್ ಅಶೋಕ್ ಅವರು ವಿಷದ ವ್ಯಕ್ತಪಡಿಸಿದರು.
ತಾಲೂಕಿನ ಬೈರಕುರು ಗ್ರಾಮದಲ್ಲಿ ಭವಿಷ್ಯ ಬೆಳಕು ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಬೈರಕೂರು ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ರಸ್ತೆ ಸುರಕ್ಷಾ ಸಾಕ್ಷರತಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದ್ವಿಚಕ್ರ ವಾಹನ ಚಾಲನೆ ಮಾಡುವಂತಹ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ವಾಹನಕ್ಕೆ ಪರವಾನಿಗೆ ಮತ್ತು ಜೀವವಿಮೆಯನ್ನು ಮಾಡಿಸಿಕೊಂಡು ಚಾಲನೆ ಮಾಡಿದರೆ ತುಂಬಾ ಅನುಕೂಲವಾಗುತ್ತದೆ. ಅಪಘಾತ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಪಿಡಿಒ ಚಂದ್ರಶೇಖರ್ ಮಾತನಾಡಿ, ಯಾವುದೇ ಒಂದು ಮನೆಯಲ್ಲಿ ಒಬ್ಬ ವ್ಯಕ್ತಿ ತುಂಬಾ ಮುಖ್ಯ. ಆ ವ್ಯಕ್ತಿಯ ಪ್ರಾಣ ತುಂಬಾ ಅತ್ಯ ಅಮೂಲ್ಯ. ಏಕೆಂದರೆ ಆ ವ್ಯಕ್ತಿ ಆ ಕುಟುಂಬವನ್ನು ಎಲ್ಲ ರೀತಿಯಲ್ಲೂ ಕಾಪಾಡಿಕೊಂಡು ನಿರ್ವಹಣೆ ಮಾಡುತ್ತಿರುತ್ತಾನೆ. ಅಂತಹ ವ್ಯಕ್ತಿ ಅಪಘಾತದಲ್ಲಿ ಮರಣ ಹೊಂದಿದಾಗ ಇಡೀ ಕುಟುಂಬ ಬೀದಿ ಪಾಲಾಗುತ್ತದೆ. ಆದ್ದರಿಂದ ಅಪಘಾತಕ್ಕೆ ದೂರವಿರುವಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಕಿವಿ ಮಾತು ಹೇಳಿದರು.
ಗ್ರಾಮ ಪಂಚಾಯಿತಿ ಸರ್ವ ಸದಸ್ಯರ ಮಹಾ ಒಕ್ಕೂಟ ಅಧ್ಯಕ್ಷ ಪಿ.ವಿ. ಶಂಕರ್ ಮಾತನಾಡಿ, 18 ವರ್ಷದ ಒಳಗಿನ ಮಕ್ಕಳಿಗೆ ಪೋಷಕರು ಮೊಬೈಲ್ ಮತ್ತು ದ್ವಿಚಕ್ರ ವಾಹನವನ್ನು ಖರೀದಿಸಿಕೊಡಬೇಡಿ ಏಕೆಂದರೆ ಅವರು ಯಾವುದೇ ರೀತಿಯ ರಸ್ತೆ ಸುರಕ್ಷಿತ ಕ್ರಮಗಳನ್ನು ಪಾಲಿಸೊದಿಲ್ಲ. ಅತಿಯಾದ ವೇಗದಿಂದ ವಾಹನ ಚಲನೆ ಮಾಡುತ್ತಾರೆ. ವಾಹನ ನಿಯಂತ್ರಣ ಶಕ್ತಿ ಇವರಿಗೆ ಕಡಿಮೆ ಇರುತ್ತದೆ. ಸಂಚಾರದಲ್ಲಿ ಮೊಬೈಲ್ ಬಳಕೆ ಮಾಡುವುದರಿಂದ ಅಪಘಾತಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದರು.
ದ್ವಿಚಕ್ರ ವಾಹನಕ್ಕೆ 40, ಕಾರು ಲಾರಿ ಸೇರಿದಂತೆ 60 ವೇಗ ನಿಯಂತ್ರಣವನ್ನು ಸರ್ಕಾರ ನಿಗದಿ ಮಾಡಬೇಕು. ಇದರಿಂದ ಅಪಘಾತಗಳನ್ನು ತಪ್ಪಿಸಲು ಸ್ವಲ್ಪ ಮಟ್ಟಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಗ್ರಾ.ಪಂ ಮಾಜಿ ಅಧ್ಯಕ್ಷ ಲಕ್ಷ್ಮೀ ನಾರಾಯಣಚಾರಿ, ಉಪಾಧ್ಯಕ್ಷ ಕುಮಾರಮ್ಮ ತಿಪ್ಪಣ್ಣ, ಸದಸ್ಯರಾದ ಸುಮಲತ ಬಾಲಸುಬ್ರಮಣಿ, ಬಿ.ಎಂ.ಮಂಜುನಾಥ್, ಬಾಬು, ಸುರೇಂದ್ರ ನಾಯ್ಡು, ಜ್ಞಾನವತಿ ವಿನಯ್ ಕುಮಾರ್, ಪ್ರಶಾಂತ್, ಉದಯ್ ಕುಮಾರ್, ಲಲಿತಮ್ಮ ವೆಂಕಟರಾಮಾಚಾರಿ, ರಾಮಣ್ಣ ಮತ್ತು ಗ್ರಾ.ಪಂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.