April 20, 2025

ಕೋಲಾರ:

  •  ವಿದ್ಯಾರ್ಥಿ ಜೀವನದಲ್ಲಿ ಮಾನಸಿಕ ಆರೋಗ್ಯ ತುಂಬಾ ಮಹತ್ವವನ್ನು ಪಡೆದುಕೊಳ್ಳುತ್ತದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಹ ಯಾವುದೇ ರೀತಿಯ ಕೀಳರಿಮೆ ಮನೋಭಾವ ಬೆಳೆಯದಂತೆ ಸುತ್ತಮುತ್ತಲಿನ ಸಮಾಜ ಮುಂದಾಗಬೇಕೆಂದು ಜಿಲ್ಲಾ ಮಾನಸಿಕ ಆರೋಗ್ಯ ಘಟಕ ಮನೋವೈದ್ಯರಾದ ಡಾ.ವಿಜೇತದಾಸ್ ಹೇಳಿದರು.

ತಾಲೂಕಿನ ಮಂಗಸಂದ್ರ ಗ್ರಾಮದ ಶ್ರೀ ಮಂಜುನಾಥ ಐಟಿಐ ಕಾಲೇಜಿನಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಮತ್ತು ಜೀವನ ಕೌಶಲ್ಯಗಳ ಕುರಿತು ಹಮ್ಮಿಕೊಳ್ಳಲಾದ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಯಾವುದೇ ಕಾರಣಕ್ಕೂ ಏರುಪೇರು ಆಗಬಾರದು. ಪೋಷಕರು ಮತ್ತು ಶಿಕ್ಷಕರು ಉತ್ತಮವಾದ ವಾತಾವರಣವನ್ನು ನಿರ್ಮಾಣ ಮಾಡಿ ತಮ್ಮ ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಮುನ್ನಡಸಬೇಕೆಂದು ಸಲಹೆ ನೀಡಿದರು.

ಶಾಲಾ ಕಾಲೇಜು ಹಂತದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಮನಸ್ಸು ಚಂಚಲವಾಗಿರುತ್ತದೆ. ಆ ಚಂಚಲತೆಯನ್ನು ಹತೋಟಿಯಲ್ಲಿಟ್ಟುಕೊಳ್ಳುವ ಬಗ್ಗೆ ಶಿಕ್ಷಕರು, ಪೋಷಕರು ಕಾಲಕಾಲಕ್ಕೆ ಮಾರ್ಗದರ್ಶನವನ್ನು ನೀಡಿದರೆ ಮಾತ್ರ ಮಕ್ಕಳು ಸನ್ಮಾರ್ಗದಲ್ಲಿ ನಡೆಯಲು ಅನುಕೂಲ. ಇಂತಹ ಮಹತ್ತರವಾದ ಕೆಲಸವನ್ನು ಎಲ್ಲಾ ಪೋಷಕರೂ ಸಹ ತಪ್ಪದೆ ಕೈಗೊಳ್ಳಬೇಕಿದೆ ಎಂದರು.

ಚಿತ್ತ ಚಂಚಲತೆ, ಚಿತ್ತ ವಿಕಲತೆ, ಮದ್ಯ ಮಾದಕ ವಸ್ತುಗಳು, ಬುದ್ಧಿಮಾಂದ್ಯತೆ, ಮನೋದೈಹಿಕ ಬೇನೆಗಳು, ವ್ಯಕ್ತಿ ದೋಷಗಳು, ಮೆದುಳಿನ ಅಂಗ ದೋಷದ ಕಾಯಿಲೆಗಳು ಸೇರಿದಂತೆ ವಿವಿಧ ಬಗೆಯ ಮಾನಸಿಕ ರೋಗದ ಲಕ್ಷಣ, ದುಷ್ಪರಿಣಾಮ ಮತ್ತು ಬಗೆಹರಿಸಿಕೊಳ್ಳುವ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಚಿಕಿತ್ಸಾ ಮನಃಶಾಸ್ತ್ರಜ್ಞನರಾದ ಬಿ.ಎಂ.ಶ್ರೀನಾಥ್ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಮುಂದಿನ ಭವಿಷ್ಯಕ್ಕೆ ಉದ್ಯೋಗವನ್ನು ಗಿಟ್ಟಿಸಿಕೊಳ್ಳಲು ಆಯಾಕ್ಷೇತ್ರದಲ್ಲಿ ಕೌಶಲ್ಯ ಅಭಿವೃದ್ಧಿ ಪಡಿಸಿಕೊಂಡರೆ ಮಾತ್ರ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗುವ ಜೊತೆಗೆ ಹಣವನ್ನು ಸಂಪಾದನೆ ಮಾಡಬಹುದು. ಆದಕಾರಣ ಪ್ರತಿಯೊಬ್ಬರು ಉತ್ತಮ ರೀತಿಯಲ್ಲಿ ನಡೆದುಕೊಳ್ಳುವ ಅನಿವಾರ್ಯತೆ ಇರುತ್ತದೆ. ಇದಕ್ಕೆ ವಿರುದ್ಧವಾದರೆ ಸಮಾಜವು ಸಹ ನಮ್ಮ ವಿರುದ್ಧ ಇರುತ್ತದೆ ಎಂಬುದನ್ನು ಯಾರೂ ಮರೆಯುವಂತಿಲ್ಲ ಎಂದು ತಿಳಿಸಿದರು.

ಯುವ ಜನರು ವಿವಿಧ ಕ್ಷೇತ್ರಗಳಲ್ಲಿ ಹಲವಾರು ಕೌಶಲ್ಯಗಳನ್ನು ಪಡೆದು ತಮ್ಮ ಜೀವನ ರೂಪಿಸಿಕೊಳ್ಳಲು ಯೋಚಿಸಿಕೊಳ್ಳುವ ಬಗ್ಗೆ ಹಲವಾರು ಸಮಸ್ಯೆಗಳಿಗೆ ಒಳಗಾಗಿ ತಮ್ಮ ಮಾನಸಿಕ ಆರೋಗ್ಯ ಹದಗೆಡಿಸಿಕೊಳ್ಳುತ್ತಾರೆ. ಇದರಿಂದ ಪಾರಾಗಲು ಎಲ್ಲಾ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ‌‌ ಮಾಡಿಕೊಳ್ಳಬೇಕು ಎಂದು ಹೇಳಿದರು.

ಶ್ರೀ ಮಂಜುನಾಥ ಐಟಿಐ ಕಾಲೇಜಿನ ಪ್ರಾಂಶುಪಾಲ ಗಂಗಾಧರ್ ಗೊತ್ಯಾಲ, ಸಮಾಜಕಾರಿಯ ವಿಭಾಗದ ಶಿಕ್ಷಣಾರ್ಥಿ ಪವನ್, ಮುಬಾರಕ್ ಭಾಷ, ಡಿ.ವಿ.ಮಾಲಾಶ್ರೀ, ಡಿ.ವಿ. ಶಿವ ಕೀರ್ತನ, ಶಿರೀಷ ಸಮಾಜ ಕಾರ್ಯಕರ್ತ ಎಸ್.ಎನ್.ಅಭಿಲಾಷ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!