April 20, 2025

ಮುಳಬಾಗಿಲು : ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಸರ್ಕಾರದ ವತಿಯಿಂದ ಅನುದಾನ ಬಿಡುಗಡೆ ಆಗುವುದು ತುಂಬಾ ವಿಳಂಬವಾಗುತ್ತಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಗೋಪಾಲಗೌಡ ಹೇಳಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಕಸಾಪ ನೂತನ ಅಧ್ಯಕ್ಷರಾಗಿ ಎನ್.ಜಗದೀಶ್ ಅವರ ಪದ ಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕನ್ನಡ ಕಾರ್ಯಕ್ರಮಗಳಿಗೆ ಎಲ್ಲಾ ಸದಸ್ಯರನ್ನು ಆಹ್ವಾನ ಮಾಡುವ ಕುರಿತು ತುಂಬಾ ಗೊಂದಲಗಳಿವೆ. ನಮಗೆ ರಾಜ್ಯಾಧ್ಯಕ್ಷರು ಈಗಾಗಲೇ ಸೂಚನೆಗಳನ್ನು ನೀಡಿದ್ದಾರೆ. ಆ ನಿಟ್ಟಿನಲ್ಲಿ ನಾವೂ ಸಹ ರಾಜ್ಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇವೆ ಎಂದರು.

ಇದು ತಂತ್ರಜ್ಞಾನ ಯುಗ ಎಲ್ಲರ ಬಳಿ ವಾಟ್ಸಾಪ್ ಇದ್ದೆ ಇರುತ್ತದೆ. ಆದ ಕಾರಣದಿಂದ ಮೊಬೈಲ್ ಫೋನ್ ಗೆ ಸಂದೇಶವನ್ನು ಕಳಿಸುವ ಮೂಲಕ ಎಲ್ಲರಿಗೂ ಕಾರ್ಯಕ್ರಮದ ಬಗ್ಗೆ ಆಹ್ವಾನವನ್ನು ಕಳಿಸಲಾಗುವುದು. ಪ್ರತ್ಯೇಕವಾಗಿ ಒಬ್ಬೊಬ್ಬರಿಗೂ ಕರೆ ಮಾಡಿ ಕರೆಯುವ ಸಮಯ ಇರುವುದಿಲ್ಲ. ಕಾರ್ಯಕ್ರಮ ರೂಪುರೇಶೆಗಳ ಬಗ್ಗೆ ಹೆಚ್ಚಿನ ಸಮಯ ಆಗುವ ಕಾರಣ ಎಲ್ಲರಿಗೂ ಸಂದೇಶದ ಮೂಲಕವೆ ಆಹ್ವಾನ ನೀಡಲಾಗುತ್ತದೆ. ಆದ್ದರಿಂದ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.

ಮುಂದಿನ ವಾರದಲ್ಲಿ ತಾಲ್ಲೂಕು ಸೇರಿದಂತೆ ಹೋಬಳಿ ಮಟ್ಟದ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ಹೋಬಳಿ ಮಟ್ಟದಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡುವ ಉದ್ದೇಶದಿಂದ ಆಸಕ್ತ, ಉತ್ಸಾಹ ಮತ್ತು ಸಾಹಿತ್ಯ ಪ್ರೇಮಿಗಳಿಗೆ ಕಸಾಪ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ ಎಂದು ಹೇಳಿದರು.

ಕಸಾಪ ನೂತನ ಅಧ್ಯಕ್ಷ ಎನ್.ಜಗದೀಶ್ ಮಾತನಾಡಿ, ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸ ಇದೆ. ಅಂತಹ ಚಾರಿತ್ರಿಕ, ಐತಿಹಾಸಿಕ ಹಿನ್ನೆಲೆ ಹೊಂದಿರುವ ನಮ್ಮ ನಾಡು, ನುಡಿಗೆ ಯಾರೂ ಸಹ ಧಕ್ಕೆ ತರದಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಕನ್ನಡ ಪರ ಕಾರ್ಯಕ್ರಮಗಳು ನಿಂತ ನೀರಲ್ಲ ಸದಾ ಹರಿಯುವ ನೀರಿನಂತೆ ಆದ ಕಾರಣದಿಂದ ಎಲ್ಲರೂ ಕೈ ಜೋಡಿಸಿದರೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ ಎಂದರು.

ನಿಕಟ ಪೂರ್ವ ಅಧ್ಯಕ್ಷ ಹರೀಶ್ ಮಾತನಾಡಿ, ಕನ್ನಡ ಸೇವೆಯು ವ್ಯಾಪಾರ, ವ್ಯವಹಾರ ಮತ್ತು ರಾಜಕೀಯದಿಂದ ಬಹು ದೂರ. ಇಲ್ಲಿ ಸೇವೆಯೆ ಅತಿ ಮುಖ್ಯ. ಅಷ್ಟೇ ಅಲ್ಲ ಇಲ್ಲಿ ಯಾರೂ ಸಹ ಲಾಭದಾಯಕ ಮನಸ್ಸನ್ನು ಹೊಂದಿರುವುದಿಲ್ಲ. ಆದ್ದರಿಂದ ಜವಬ್ದಾರಿಯುತ ಸ್ಥಾನಕ್ಕೆ ನಾವೆಲ್ಲರೂ ಸಹಕಾರವನ್ನು ನೀಡುವ ಮೂಲಕ ಕನ್ನಡ ಕಾರ್ಯಕ್ರಮಗಳಿಗೆ ಸಹಕಾರವನ್ನು ನೀಡಬೇಕೆಂದು ಕೋರಿದರು.

ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಎಂ.ವಿ.ಜನಾರ್ಧನ್, ಶಂಕರಪ್ಪ, ಕನ್ನಡ ಪರ ಸಂಘಟನೆಗ ಒಕ್ಕೂಟ ಅಧ್ಯಕ್ಷ ಶಂಕರ್ ಕೇಸರಿ, ದಲಿತ ಮುಖಂಡ ಮೆಕಾನಿಕ್ ಶ್ರೀನಿವಾಸ್ ಸೇರಿದಂತೆ ಕಸಾಪ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!