
ಮುಳಬಾಗಿಲು : ನೇತಾಜಿ ನಗರದ ನಿವಾಸಿ ದಲಿತ ಮುಖಂಡ ಮೆಕಾನಿಕ್ ಜಿ.ಶ್ರೀನಿವಾಸ್ ಅವರು ತೆಲಂಗಾಣ ಬಹುಜನ ಸಾಹಿತ್ಯ ಅಕಾಡೆಮಿ ವತಿಯಿಂದ ತಿರುಪತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಗುರಪ್ಪ ಮತ್ತು ನಾಗಮ್ಮ ದಂಪತಿಗಳ 3ನೇ ಮಗನಾಗಿ 05 ಜೂನ್ 1973 ರಂದು ಜನನ ಪಡೆಯುತ್ತಾರೆ. ಐದನೇ ತರಗತಿಯ ವರೆಗೆ ವಿದ್ಯಾಭ್ಯಾಸವನ್ನು ಮಾಡಿದ್ದು, ಇದಾದ ಬಳಿಕ ದ್ವಿಚಕ್ರ ವಾಹನಗಳ ಮೆಕಾನಿಕ್ ಆಗಿ ವೃತ್ತಿಯನ್ನು ಆರಂಭಿಸಿದರು.
2007ರಲ್ಲಿ ದಲಿತ ಸಂಘರ್ಷ ಸಮಿತಿ ಸಂಯೋಜಕ ರಾಜ್ಯ ಮುಖಂಡರಾದ ವಿ.ನಾಗರಾಜ್ ಅವರ ಸ್ಪೂರ್ತಿ, ಮಾರ್ಗದರ್ಶನ ಪಡೆದು ಇದೇ ಸಂಘಟನೆಯಲ್ಲಿ ಪ್ರಗತಿಪರ ಹೋರಾಟಗಳಿಗೆ ಧುಮುಕಿದರು. ದಲಿತ, ರೈತ, ವಿದ್ಯಾರ್ಥಿ ಸೇರಿದಂತೆ ಸಮಾಜದ ಕಟ್ಟ ಕಡೆಯ ದೌರ್ಜನ್ಯ, ದೀನ ದೌರ್ಬಲ್ಯ, ಅಸ್ಪೃಶ್ಯತೆ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಮತ್ತು ಸಮಾಜ ವಿರೋಧಿ ನೀತಿಯ ವಿರುದ್ಧ ಹಲವಾರು ಹೋರಾಟಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
148 ದಿನಗಳ ಹೋರಾಟದಲ್ಲಿ ಭಾಗಿ: ಸ್ವಾಮಿ ವಿವೇಕಾನಂದ ನಗರ ನಿವಾಸಿಗಳು 2007-08 ರಲ್ಲಿ ತಮ್ಮ ನಿವೇಶನಗಳನ್ನು ಕಳೆದುಕೊಂಡು ಬೀದಿ ಪಾಲಾದಾಗ ನೂರಾರು ಜನರ ಸಮ್ಮುಖದಲ್ಲಿ ನಿರಂತರವಾಗಿ 148 ದಿನಗಳ ಕಾಲ ಹೋರಾಟ ಒಂದು ಮೈಲುಗಲ್ಲಾಗಿತ್ತು.
ಹೋರಾಟ ಪ್ರತಿಫಲದಿಂದ ಜೈಭೀಮ್ ನಗರ ನಿರ್ಮಾಣ ಆಗಿ ಅಲ್ಲಿ ವಸತಿ, ನಿವೇಶನ, ವಿದ್ಯುತ್, ರಸ್ತೆ, ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸುವವರೆಗೂ ಬೆಂಬಲಿಗರೊಂದಿಗೆ ಹೋರಾಟವನ್ನು ಮಾಡುತ್ತಾ ಬಂದಿದ್ದಾರೆ.
ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ, ಅಲ್ಪಸಂಖ್ಯಾತ ಸೇರಿದಂತೆ ಎಲ್ಲಾ ಸಮುದಾಯದ ಜನಾಂಗದವರ ಜೊತೆಯಲ್ಲಿ ಸ್ನೇಹ ಉತ್ತಮವಾದ ಸಂಬಂಧವನ್ನು ಹೊಂದಿ ಎಲ್ಲಿಯಾದರೂ ತಗಾದೆ, ಗಲಾಟೆ, ಗಲಭೆ ಉಂಟಾದರೆ ಮೊದಲಿಗೆ ಸ್ಥಳೀಯರೊಂದಿಗೆ ಪಂಚಾಯಿತಿ ನಡೆಸುವ ಪ್ರಯತ್ನಗಳು ಮಾಡುತ್ತಾರೆ. ಇನ್ನೂ ಕೆಲವೊಮ್ಮೆ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಕೆಲ ಪ್ರಕರಣಗಳನ್ನು ಇತ್ಯರ್ಥ ಮಾಡಿದ ಉದಾಹರಣೆಗಳು ಸಾಕಷ್ಟು ಕಾಣಬಹುದು.
ಕೂಳು-ಗೂಡು: 2008 ರಲ್ಲಿ ಬಡವರಿಗೆ ಅಕ್ಕಿ, ನಿವೇಶನ ರಹಿತರಿಗೆ, ಭೂ ರಹಿತರಿಗೆ ಭೂಮಿ ನೀಡಬೇಕೆಂದು ಹೋರಾಟವನ್ನು ನಡೆಸಲಾಗಿತ್ತು. ಇದರಿಂದಾಗಿ ಅನ್ನಭಾಗ್ಯದಂತ ಯೋಜನೆಗಳು ಜಾರಿದವು. ಹಕ್ಕು ಪತ್ರ ಮತ್ತು ಸಾಗುವಳಿ ಚೀಟಿಗಳು ವಿತರಣೆ ಆದವು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿ ಆಗಿರುವ ನಾನು ನಿರಂತರವಾಗಿ ಸಂವಿಧಾನಾತ್ಮಕವಾಗಿ ಜನಸಾಮಾನ್ಯರ ಪರವಾಗಿ, ಶೋಷಿತ, ದಮನಿತ, ವಂಚಿತರ ಪರವಾಗಿ ಹೋರಾಟವನ್ನು ಮಾಡುತ್ತೇನೆ ಎನ್ನುತ್ತಾರೆ ಜಿ.ಶ್ರೀನಿವಾಸ್ ಅವರು.
ತೆಲಂಗಾಣ ಬಹುಜನ ಸಾಹಿತ್ಯ ಅಕಾಡೆಮಿ ವತಿಯಿಂದ ತಿರುಪತಿಯಲ್ಲಿ ಭಾನುವಾರ ನಡೆದ ಬಹುಜನ ಬರವಣಿಗೆಗಾರರ 7ನೇ ದಕ್ಷಿಣ ಭಾರತದ ಸಮಾವೇಶ 2024ನೇ ವರ್ಷದ ಪ್ರಶಸ್ತಿ ಪ್ರಧಾನೋತ್ಸವ ಕಾರ್ಯಕ್ರಮದಲ್ಲಿ ಜಿ.ಶ್ರೀನಿವಾಸ್ ಅವರಿಗೆ ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
2024 ಅವಾರ್ಡ್ ಪ್ರಧಾನೋತ್ಸವದಲ್ಲಿ ದೇಶದ ಎಲ್ಲಾ ರಾಜ್ಯಗಳಿಂದ ಹೋರಾಟಗಾರ, ಸಾಹಿತಿಗಳನ್ನು, ಹಾಡುಗಾರರನ್ನು ಮತ್ತು ಸಮಾಜ ಸೇವಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರಾದ ನಲ್ಲರಾಧಾಕೃಷ್ಣ, ಕರ್ನಾಟಕ ರಾಜ್ಯ ಅಧ್ಯಕ್ಷರಾದ ಎನ್.ಡಿ. ವೆಂಕಮ್ಮ,
ತೆಲಂಗಾಣದ ಮೀಸಲಾ ಗಣೇಶ್ ಮತ್ತಿತರರು ಇದ್ದರು.