
ಮುಳಬಾಗಲು: ಡೇರಿಗಳ ಆಡಳಿತ ಮಂಡಳಿಯವರು ಗುಣಮಟ್ಟದ ಹಾಲು ಸಂಗ್ರಹಣೆ ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲನ್ನು ಒಕ್ಕೂಟಕ್ಕೆ ಸರಬರಾಜು ಮಾಡಬೇಕೆಂದು ಕೋಚಿಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ತಿಳಿಸಿದರು.
ನಗರದ ಎಪಿಎಂಸಿ ಆವರಣದಲ್ಲಿರುವ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಬಂಗವಾದಿ ಡೇರಿಗೆ ಅವಿರೋಧ ಅಧ್ಯಕ್ಷರಾಗಿ ವೆಂಕಟರವಣಪ್ಪ, ಉಪಾಧ್ಯಕ್ಷ ಗೋವಿಂದಪ್ಪ ಅವರನ್ನು ಅಭಿನಂದಿಸಿ ಮಾತನಾಡಿದರು. ಡೇರಿಗಳ ಸಮಗ್ರ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸುವಂತೆ ತಿಳಿಸಿದರು.
ಜೆಡಿಎಸ್ ಮುಖಂಡ ಹಾಗೂ ಕೆ.ಪಿ. ಟ್ರಾವೆಲ್ಸ್ ಮಾಲೀಕ ಎಂ.ಗೊಲ್ಲಹಳ್ಳಿ ಪ್ರಭಾಕರ್ ಮಾತನಾಡಿ, ಬಂಗವಾದಿ ಡೇರಿ ಸೇರಿದಂತೆ ಸುತ್ತಮುತ್ತಲಿನ ೧೦ಕ್ಕೂ ಹೆಚ್ಚು ಡೇರಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಗಳಲ್ಲಿ ಜೆಡಿಎಸ್ ಬೆಂಬಲಿತರೇ ಆಯ್ಕೆಯಾಗಿದ್ದು ಸಂತೋಷ ತಂದಿದೆ. ಇದಕ್ಕೆ ಶಾಸಕ ಸಮೃದ್ಧಿ ಮಂಜುನಾಥ್ ಹಾಗೂ ಕೋಚಿಮುಲ್ ನಿರ್ದೇಶಕ ಕಾಡೇನಹಳ್ಳಿ ಸೇರಿದಂತೆ ಇತರೆ ನಾಯಕರ ಸಹಕಾರ ಇತ್ತು ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಬಿ.ವಿ.ಸಾಮೇಗೌಡ, ಜೆಡಿಎಸ್ ಜಂಟಿ ಕಾರ್ಯದರ್ಶಿ ಕವತನಹಳ್ಳಿ ಮುನಿಸ್ವಾಮಿಗೌಡ, ಸೇರಿದಂತೆ ಡೇರಿಗಳ ನಿರ್ದೇಶಕರು ಹಾಗೂ ಮುಖಂಡರು ಹಾಜರಿದ್ದರು.