ಜಲ್ಲಿ ಕ್ರಷರ್, ಸೋಲಾರ್ ಪ್ಲಾಂಟ್, ಕೋಳಿಫಾರಂ, ವಾಣಿಜ್ಯ ಮಳಿಗೆ, ಭೂ ಪರಿವರ್ತನಾ ಕೈಗಾರಿಕೆಗಳು, ಹಾಲೋ ಬ್ಲಾಕ್ ಇಟ್ಟಿಗೆ, ಡಾಬಾಗಳ ಮಾಲೀಕರು ತೆರಿಗೆ ಕಟ್ಟದೇ ಸತಾಯಿಸುತ್ತಿದ್ದು ಪಿಡಿಒ ಅವರು ಕೂಡಲೇ ಅವರಿಗೆ ನೋಟಿಸ್ ನೀಡಬೇಕೆಂದು ಗ್ರಾಪಂ ಉಪಾಧ್ಯಕ್ಷ ಹಾಗೂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಜಮ್ಮನಹಳ್ಳಿ ಕೃಷ್ಣಪ್ಪ ಸೂಚಿಸಿದ್ದಾರೆ.
ದೇವರಾಯಸಮುದ್ರ ಗ್ರಾ.ಪಂ ಕಚೇರಿಯಲ್ಲಿ ಏರ್ಪಡಿಸಿದ್ದ ಸಾಮಾಜಿಕ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾ.ಪಂಗೆ 56 ಲಕ್ಷ ತೆರಿಗೆ ಬರಬೇಕಾಗಿದ್ದು ಇದರಲ್ಲಿ ಕೇವಲ 10 ಲಕ್ಷ ರೂ. ಮಾತ್ರ ಪಾವತಿಯಾಗಿದೆ. ಇದರಿಂದ ಗ್ರಾಪಂ ನಿರ್ವಹಣೆಗೆ ತೊಂದರೆ ಯಾಗಿದೆ. ಪಿಡಿಒ ಇದನ್ನು ಗಂಭೀರವಾಗಿ ಪರಿಗಣಿಸಿ ಕಾಲಾವಕಾಶ ನೀಡುವ ಮೂಲಕ ನೋಟಿಸ್ ಜಾರಿಗೆ ತಿಳಿಸಿದರು. ಬಹುತೇಕ ಜಲ್ಲಿ ಕ್ರಷರ್, ಸೋಲಾರ್ ಪ್ಲಾಂಟ್, ಕೈಗಾರಿಕೆಗಳು ಹಲವು ವರ್ಷ ಗಳಿಂದ ಸಿಎಸ್‌ಆರ್ ಫಂಡ್ ಅನ್ನು ಗ್ರಾ.ಪಂಗೆ ಪಾವತಿ ಮಾಡಿಲ್ಲ. ಈ ಬಗ್ಗೆ ಜಿಪಂ ಸಿಇಒ ಅವರಿಗೆ ದೂರು ನೀಡಲಾಗುವುದೆಂದು ತಿಳಿಸಿದರು.
ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಯಳಗೊಂಡಹಳ್ಳಿ ಬಳಿ ಇರುವ ಭಾರತ್ ಪೆಟ್ರೋಲ್ ಬಂಕ್ ನವರು 3 ವರ್ಷಗಳಿಂದ ತೆರಿಗೆ ಪಾವತಿಸದೇ ಇರುವುದರಿಂದ ವಿದ್ಯುತ್ ಕಡಿತ ಮಾಡಲು ಬೆಸ್ಕಾಂ ಅಧಿಕಾರಿಗಳಿಗೆ ಕೋರಲಾಗುವುದು. ತೆರಿಗೆ ಕಟ್ಟದೇ ಇದ್ದರೆ ಪರವಾನಿಗೆ ರದ್ದು ಮಾಡಲು ತೀರ್ಮಾನಿಸಲಾಗಿದೆ. ಮನೆ, ಕೈಗಾರಿಕೆ, ಜಲ್ಲಿ ಕ್ರಷರ್, ಸೋಲಾರ್ ಪ್ಲಾಂಟ್ ಸೇರಿದಂತೆ ಇತರೆ ಸಂಸ್ಥೆಗಳಿಗೆ ತೆರಿಗೆ ಹೆಚ್ಚಿಸುವ ಸಂಬಂಧ ಸಭೆಯಲ್ಲಿ ತೀರ್ಮಾನಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಶ್ರೀದೇವಿ ನಾರಾಯಣ ಸ್ವಾಮಿ ಮಾತನಾಡಿ, ಕಡ್ಡಾಯವಾಗಿ ತೆರಿಗೆ ವಸೂಲಿ ಮಾಡಲು ಪಿಡಿಒ ಹಾಗೂ ಇತರೆ ಸಿಬ್ಬಂದಿ ಮುಂದಾಗಬೇಕೆಂದರು. ಸಿಬ್ಬಂದಿ ಬೇಜವಾಬ್ದಾರಿಯಿಂದ ಲಕ್ಷಾಂತರ ರೂ.ತೆರಿಗೆ ಪಾವತಿಯಾಗಿಲ್ಲ. ಇದರಿಂದ ಸಿಬ್ಬಂದಿಗೆ ಸಂಬಳ ನೀಡಲು ಕಷ್ಟವಾಗುತ್ತಿದೆ ಎಂದು ತಿಳಿಸಿದರು.
ಪಿಡಿಒ ರಘುಪತಿ ಮಾತನಾಡಿ, ತೆರಿಗೆ ಬಾಕಿ ಇರುವ ಮಾಲೀಕರಿಗೆ ಕೂಡಲೇ ನೋಟಿಸ್ ಜಾರಿ ಮಾಡಲಾಗುವುದು. ಇದಕ್ಕೆ ನಿರ್ಲಕ್ಷ್ಯ ತೋರಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದೆಂದರು.
ಗ್ರಾಪಂ ಸ್ಥಾಯಿ ಸಮಿತಿ ಸದಸ್ಯರಾದ ಕಾಂತಮ್ಮ ಪ್ರಮೀಳಮ್ಮ, ಕಾರ್ಯದರ್ಶಿ ನಾರಾಯಣಸ್ವಾಮಿ, ಬಿಲ್ ಕಲೆಕ್ಟರ್ ಡಿ. ಎಂ.ವೆಂಕಟೇಶ್ ಹಾಜರಿದ್ದರು.