
ಮುಳಬಾಗಿಲು
- ಇಂದಿನ ಯುವ ಪೀಳಿಗೆ ಶಿಕ್ಷಣದ ಜೊತೆಗೆ ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಿ ಇರಬೇಕು ಎಂದು ಕಾಂಗ್ರೆಸ್ ಕಾರ್ಯದರ್ಶಿ ಮಂಡಿಕಲ್ ಮಂಜುನಾಥ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಕೆಂಚಾಪುರ ಗ್ರಾಮದ ಶಿವಮಣಿ ಎಂಬ ಯುವಕ ಬರ್ಜಿ ಎಸೆತ ಹಾಗೂ ಓಟದಲ್ಲಿ ರಾಜ್ಯಮಟ್ಟದಿಂದ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದು ಅವರನ್ನು ಸನ್ಮಾನಿಸಿ ವೈಯಕ್ತಿಕವಾಗಿ ಆರ್ಥಿಕ ಸಹಾಯ ಮಾಡುವುದರ ಮೂಲಕ ಇದೇ ತಿಂಗಳು 16 ಮತ್ತು 17 ರಂದು ಗುಜರಾತಿನಲ್ಲಿ ನಡೆಯಲಿರುವ ಕ್ರೀಡೆಯಲ್ಲಿ ಭಾಗವಹಿಸಿ ಗೆಲುವು ಸಾಧಿಸುವ ಮೂಲಕ ನಮ್ಮ ತಾಲೂಕಿನ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಕೊಂಡೊಯ್ಯ ಬೇಕು ಎಂದು ಶುಭಹಾರೈಸಿದರು.
ಎಪಿಎಂಸಿ ಮಾಜಿ ನಿರ್ದೇಶಕ ನಗವಾರ ಎನ್ ಆರ್ ಸತ್ಯಣ್ಣ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಅನೇಕ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಆಗಾಗಿ ಗ್ರಾಮೀಣ ಆಟಗಳನ್ನು ಉತ್ತೇಜಿಸಿ ಪೋಷಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಇತ್ತೀಚಿನ ದಿನಗಳಲ್ಲಿ ಯುವಕರು ಕ್ರೀಡೆಗಳಲ್ಲಿ ಆಸಕ್ತಿ ವಹಿಸದೆ ಮೊಬೈಲ್, ಟಿವಿ ಗೀಳಿಗೆ ಸಿಲುಕಿದ್ದಾರೆ.ಕ್ರೀಡೆಗಳನ್ನು ಆಡುವುದರಿಂದ ದೈಹಿಕ ಸಾಮರ್ಥ್ಯ ಹಾಗೂ ಮನಸ್ಸಿನ ಸ್ವಾಸ್ಥ ಕಾಪಾಡಿಕೊಳ್ಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ದೈಹಿಕ ಶಿಕ್ಷಕ ಶ್ರೀನಿವಾಸ್, ಮುಖಂಡರಾದ ಲೋಕಿ, ಜಾನ್ , ಸಂಗಸಂದ್ರ ಚಂದ್ರ, ಸುರ್ಜಿತ್ ಸೇರಿದಂತೆ ಮತ್ತಿತರರು ಇದ್ದರು.